ಕಾಡು ರುದ್ರಾಕ್ಷಿ

 ಸ್ಟಕ್ರ್ಯೂಲಿಯೇಸೀ ಕುಟುಂಬಕ್ಕೆ ಸೇರಿದ ಗೌಜುóಮ ಟೊಮೆಂಟೋಸ ಎಂಬ ಶಾಸ್ತ್ರೀಯ ಹೆಸರುಳ್ಳ ಮಧ್ಯಮ ಗಾತ್ರದ ಮರ (ಎತ್ತರ ಸುಮಾರು 20'-30'). ಭದ್ರಾಕ್ಷಿ ಮರ, ಜೇನುಮರ ಎಂದೂ ಇದನ್ನು ಕರೆಯುವುದುಂಟು. ಅಮೆರಿಕದ ಉಷ್ಣವಲಯದ ಮೂಲವಾಸಿಯಾದ ಇದನ್ನು ಈಗ ಭಾರತಕ್ಕೂ ತಂದು ಅಲಂಕಾರಸಸ್ಯವಾಗಿ ಬೆಳೆಸಿದ್ದಾರೆ. ಇದು ಕಾಡುಗಳಿಗೂ ಹಬ್ಬಿದೆ. ಎಲೆಗಳು ಸರಳ ಮಾದರಿಯವು. ಅವುಗಳ ಜೋಡಣೆ ಪರ್ಯಾಯ. ಎಲೆಯ ಮೇಲೆಲ್ಲ ಸೂಕ್ಷ್ಮವಾದ ಕೂದಲುಗಳಿರುವುದರಿಂದ ಎಲೆ ಒರಟಾಗಿದೆ. ಹೂಗಳು ಚಿಕ್ಕವು, ಹಳದಿ ಬಣ್ಣದವು, ದ್ವಿಲಿಂಗಿಗಳು. ಎಲೆಗಳ ಕಂಕುಳಲ್ಲಿ ಹುಟ್ಟುವ ಮಧ್ಯಾರಂಭಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪುಷ್ಪಪತ್ರಗಳು 5, ದಳಗಳೂ 5.ದಳಗಳ ಬುಡ ಕುಳಿಯಂತಿದೆ; ತುದಿ ಪಟ್ಟಿಯ ರೂಪದಲ್ಲಿ ಬೆಳೆದಿದ್ದು ಕವಲೊಡೆದಿದೆ. ಕೇಸರಗಳು 5; ಇವುಗಳಿಗೆ ಪರ್ಯಾಯವಾಗಿ 5 ಬಂಜೆಕೇಸರಗಳಿವೆ. ಕೇಸರಗಳ ಹಾಗೂ ಬಂಜೆ ಕೇಸರಗಳ ಬುಡ ಕೂಡಿಕೊಂಡಿದೆ. ಅಂಡಾಶಯ ಉಚ್ಚಸ್ಥಾನದ್ದು: 5 ಕಾರ್ಪೆಲುಗಳಿಂದ ಕೂಡಿದೆ. ಅಂಡಕಗಳು ಅಸಂಖ್ಯ. ಕಾಯಿ ಗುಂಡಗಿದೆ. ಬಲುಗಟ್ಟಿ, ಅದರ ಮೇಲೆಲ್ಲ ಸಣ್ಣ ಸಣ್ಣ ಗಂಟುಗಳಿವೆ. ಇದರಿಂದಾಗಿ ಕಾಯಿ ರುದ್ರಾಕ್ಷಿಯನ್ನು (ಏಲಿಯೋಕಾರ್ಪಸ್ ಜಾನಿಟ್ರಸ್ ಎಂಬ ಗಿಡದ ಕಾಯಿ) ಹೋಲುತ್ತದೆ.

 ಕಾಯಿ ತಿನ್ನಲು ಯೋಗ್ಯ. ಇದರಲ್ಲಿ ಒಂದು ಬಗೆಯ ಸಿಹಿ ಅಂಟುಪದಾರ್ಥವಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅತಿಸಾರವುಂಟಾಗುತ್ತದೆ. ಮಾರಿಷಸ್ ದ್ವೀಪದಲ್ಲಿ ಕಾಯನ್ನು ಬ್ರಾಂಕೈಟಿಸ್ ರೋಗ ನಿವಾರಣೆಗೂ ಪ್ರತಿ ಬಂಧಕವಾಗೂ ಉಪಯೋಗಿಸುತ್ತಾರೆ. ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ ಇದರ ತೊಗಟೆಯನ್ನು ಆನೆಕಾಲಿನ ರೋಗ ನಿವಾರಣೆಗೂ ಶಕ್ತಿವರ್ಧನೆಗೂ ಬಳಸುವುದುಂಟು ಕಾಡುರುದ್ರಾಕ್ಷಿಯ ಎಳೆಯ ಕಾಂಡದಿಂದ ನಾರನ್ನು ತೆಗೆದು ಹಗ್ಗ ಮಾಡಲು ಉಪಯೋಗಿಸುತ್ತಾರೆ. ಚೌಬೀನೆಯಿಂದ ಪೆಟ್ಟಿಗೆ, ಪೀಠೋಪಕರಣಗಳನ್ನು ಮಾಡಬಹುದು.

(ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ